  ಕಿಂಗ್, ಮಾರ್ಟಿನ್ ಲ್ಯೂಥರ್ (ಜೂನಿಯರ್) 

 1929-1968. ವರ್ಣಭೇದ ಹಾಗೂ ಪ್ರತ್ಯೇಕೀಕರಣ ನೀತಿಯ ವಿರುದ್ಧ ಅಮೆರಿಕದ ನೀಗ್ರೋಗಳು ನಡೆಸಿದ ಹೋರಾಟದ ಪ್ರಮುಖನಾಯಕ. ಮೂವತ್ತೊಂಬತ್ತು ವರ್ಷದ ತನ್ನ ಆಯಸ್ಸಿನಲ್ಲಿ ಕಿಂಗ್ ಹದಿನೈದಕ್ಕೂ ಹೆಚ್ಚು ಬಾರಿ ಜೈಲನ್ನು ಕಂಡ: ಲೆಕ್ಕವಿಲ್ಲದಷ್ಟು ಬೆದರಿಕೆಗಳನ್ನು ಎದುರಿಸಿದ; ಅನೇಕ ಸಲ ಏಟುಗಳನ್ನು ತಿಂದ. ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ ನೀಗ್ರೋಗಳ ಮಿಡುಕಾಟದ, ಧೈರ್ಯಸ್ಥೈರ್ಯಗಳ ಅಹಿಂಸೆಯ ಉದಾತ್ತ ಸಂಕೇತವಾಗಿ ಬೆಳೆದ.

 ಕಿಂಗ್ ಹುಟ್ಟಿದ್ದು 1929ರ ಜೂನ್ 15ರಂದು. ತಂದೆ ಜಾರ್ಜಿಯ ಸಂಸ್ಥಾನದ ಅಟ್ಲಾಂಟದ ಚರ್ಚೊಂದರ ನೀಗ್ರೋ ಪಾದ್ರಿ; ನೀಗ್ರೋ ಅಸಹಕಾರದ ನಾಯಕ ಕಿಂಗ್ ಪ್ರತಿಭಾವಂತ ವಿದ್ಯಾರ್ಥಿಯಾದ್ದರಿಂದ 19 ವರ್ಷಕ್ಕೇ ಪದವೀಧರನಾಗಿ ಮುಂದೆ ಧರ್ಮಶಾಸ್ತ್ರ ಪದವಿಗಾಗಿ ಬಿಳಿಯರ ಕಾಲೇಜೊಂದರಲ್ಲಿ ಓದಿದ. 1951ರಲ್ಲಿ ಕಾಲೇಜಿಗೆ ಮೊದಲಿಗನಾಗಿ ಉತ್ತೀರ್ಣನಾದ. ಇದಾದ ಮೇಲೆ ಬಾಸ್ಟನಿನಲ್ಲಿ ಡಾಕ್ಟೊರೇಟ್‍ಗೆ ವ್ಯಾಸಂಗ ನಡೆಸಿ, ಅಲ್ಲೇ ಸಂಗೀತ ಕಲಿಯುತ್ತಿದ್ದ ಕೊರೆಟಾ ಸ್ಕಾಟಳನ್ನು ಮದುವೆಯಾದ.

 1954ರಲ್ಲಿ ಕಿಂಗ್ ಅಲಬಾಮಾ ರಾಜ್ಯದ ಮಾಂಟ್ಗಿಮರಿಯ ಡೆಕ್ಸೆಟರ್ ಅವೆನ್ನೂ ಬ್ಯಾಷ್ಟಿಸ್ಟ್ ಚರ್ಚಿನ ಪಾದ್ರಿಯಾಗಿ ಕೆಲಸವನ್ನು ಒಪ್ಪಿಕೊಂಡು ಆ ನಗರಕ್ಕೆ ಸೆಪ್ಟೆಂಬರಿನಲ್ಲಿ ಬಂದು ನೆಲಸಿದ. ತನ್ನ ಚರ್ಚಿನ ವ್ಯಾಪ್ತಿಗೆ ಒಳಪಟ್ಟ ನೀಗ್ರೋಗಳ ಸಂಘಟನೆಗಾಗಿ ಮಾತ್ರ ಪ್ರಯತ್ನಿಸುತ್ತ ತನ್ನ ಕರ್ತವ್ಯ ಪಾಲಿಸುತ್ತ ಸಾಮಾನ್ಯ ಗೃಹಸ್ಥಜೀವನ ಪ್ರಾರಂಭಿಸಿದ.

 1955ರ ಡಿಸೆಂಬರ್ 1ರಂದು ಮಾಂಟ್ಗಮರಿಯ ನಗರ ಬಸ್ಸೊಂದರಲ್ಲಿ ಕುಳಿತಿದ್ದ ರೋಸಾ ಪಾಕ್ರ್ಸ್ ಎಂಬ ನೀಗ್ರೋ ಮಹಿಳೆ ಆ ಬಸ್ಸಿನಲ್ಲಿದ್ದ ಬಿಳಿಯನೊಬ್ಬನಿಗೆ ತನ್ನ ಸ್ಥಳವನ್ನು ಬಿಟ್ಟುಕೊಡಲು ನಿರಾಕರಿಸಿ ಪೋಲೀಸರ ಬಂಧನಕ್ಕೆ ಒಳಗಾದಾಗ. ಬಸ್ಸುಗಳಲ್ಲಿ ಅನುಸರಿಸಲಾಗುತ್ತಿದ್ದ ಪ್ರತ್ಯೇಕೀಕರಣ ನೀತಿಯಿಂದ ನೀಗ್ರೋಗಳು ಅಸಮಾಧಾನಗೊಂಡು. ಡಿಸೆಂಬರ್ 5 ರಂದು ಬಸ್ಸುಗಳಿಗೆ ಬಹಿಷ್ಕಾರ ಹಾಕಲು ನಿರ್ಧರಿಸಿದರು. ಕಿಂಗನನ್ನು ತಮ್ಮ ನಾಯಕನಾಗಿ ಆಯ್ಕೆ ಮಾಡಿದರು. ಒಂದು ದಿನದ ಬಹಿಷ್ಕಾರ 382 ದಿನ ಮುಂದುವರಿಯಿತು. ಬಹಿಷ್ಕಾರದ ನಾಯಕತ್ವ ಸುಲಭವಾಗಿರಲಿಲ್ಲ. ಅಧಿಕಾರಿಗಳು ಕಿಂಗನನ್ನು ಕುಂಟು ನೆವೆ ಹೇಳಿ ಬಂಧಿಸಿದರು. ಹೆಂಡತಿ ಮತ್ತು ಎರಡು ಮಗು-ಇಬ್ಬರೇ ಮನೆಯೊಳಗಿದ್ದಾಗ ಅವರ ಮನೆಯೊಳಕ್ಕೆ ಬಾಂಬನ್ನು ಎಸೆಯಲಾಯಿತು. ರೊಚ್ಚಿಗೆದ್ದ ನೀಗ್ರೋಗಳನ್ನು ಸಮಾಧಾನಪಡಿಸುತ್ತ ಕಿಂಗ್ ಅವರಿಗೆ ತಮ್ಮ ಅಹಿಂಸಾವ್ರತದ ಮೊದಲ ಪಾಠವನ್ನು ಕಲಿಸಿದ. ಅಲಬಾಮದ ಬಸ್ ಪ್ರತ್ಯೇಕೀಕರಣ ನೀತಿ ಕಾನೂನುಬಾಹಿರವೆಂದು ಅಮೆರಿಕದ ಪರಮೋಚ್ಚ ನ್ಯಾಯಾಲಯ ಸಾರಿತು. ಬಹಿಷ್ಕಾರದ ಈ ಅಪ್ರತಿಮ ವಿಜಯದಿಂದಾಗಿ ಕಿಂಗನ ನಾಯಕತ್ವಕ್ಕೆ ರಾಷ್ಟ್ರೀಯ ಮನ್ನಣೆ ದೊರೆಯಿತು.

 ಮುಂದಿನ ಮೂರು ವರ್ಷ ಕಿಂಗ್ ಅಮೆರಿಕದ ನೀಗ್ರೋಗಳ ಸಂಘಟನೆಗಾಗಿ ಬಿಡುವಿಲ್ಲದೆ ಕೆಲಸ ಮಾಡಿದ. 1957ರಲ್ಲಿ ಆಫ್ರಿಕದ ಘಾನಾ ರಾಜ್ಯದ ಸ್ವಾತಂತ್ರ್ಯೋತ್ಸವದಲ್ಲಿ ಆ ಸರ್ಕಾರದ ಅತಿಥಿಯಾಗಿ ಭಾಗವಹಿಸಿದ್ದ. 1959ರಲ್ಲಿ ನೀಗ್ರೋ ಹೋರಾಟದಲ್ಲಿ ತನಗೆ ಸ್ಫೂರ್ತಿ ಕೊಟ್ಟಿದ್ದ ಗಾಂಧೀಜಿಯ ದೇಶವಾದ ಭಾರತದ ಯಾತ್ರೆ ಕೈಗೊಂಡ.

 ರಾಷ್ಟ್ರೀಯ ನಾಯಕತ್ವದ ಹೊಣೆ ಹೊರುತ್ತ ಒಂದು ಚರ್ಚಿನ ಎಲ್ಲ ಕೆಲಸವನ್ನೂ ತಾನೇ ನೋಡಿಕೊಳ್ಳುವುದು ಕಿಂಗನಿಗೆ ಕಠಿಣವಾಯಿತು. ಆದ್ದರಿಂದ 1960ರಲ್ಲಿ ಆತ ಮಾಂಟಮರಿಯನ್ನು ಬಿಟ್ಟು ಅಟ್ಲಾಂಟಕ್ಕೆ ಬಂದ. ಅಲ್ಲಿಯ ಬ್ಯಾಪ್ಟಿಸ್ಟ್ ಚರ್ಚಿನಲ್ಲಿ ತನ್ನ ತಂದೆಯ ಸಹಾಯಕ ಪಾದ್ರಿಯಾದ. ಉಪಾಹಾರಗೃಹ ಪ್ರವೇಶ, ಬಿಳಿಯರ ಮತ್ತು ನೀಗ್ರೋಗಳ ಸಂಯುಕ್ತ ಬಸ್ ಪ್ರವಾಸ ಪ್ರದರ್ಶನ-ಹೀಗೆ ದಕ್ಷಿಣ ನೀಗ್ರೋ ಹೋರಾಟ 1960-61ರಲ್ಲಿ ಹೊಸ ಹೊಸ ರೂಪ ತಳೆಯಿತು. ಈ ಸ್ವಾತಂತ್ರ್ಯ ಪ್ರವಾಸಗಳ ಫಲಶ್ರುತಿಯಾಗಿ ಜಾರ್ಜಿಯದಲ್ಲಿ ಹೊಸದೊಂದು ಚಳವಳಿಯೇ ಪ್ರಾರಂಭವಾಯಿತು. ಕಿಂಗ್ ಇದರ ನಾಯಕತ್ವ ವಹಿಸಿದ. ಸುಮಾರು 2,000 ಜನ ಜೈಲನ್ನು ತುಂಬಿದರು. ಆದರೂ ಚಳವಳಿ ಸಫಲವಾಗಲಿಲ್ಲ.

 ನೀಗ್ರೋ ಚಳವಳಿಯ ವಿಚಾರದಲ್ಲಿ ಅಮೆರಿಕದ ಕೇಂದ್ರ ಸರ್ಕಾರ ಸಾಕಷ್ಟು ದೃಢವಾದ ನಿಲವನ್ನು ತಳೆದಿಲ್ಲ. ಅದಕ್ಕೆ ಅಗತ್ಯವಾದ ಕಾನೂನಿನ ನೆರವನ್ನು ಕೊಡುತ್ತಿಲ್ಲ ಎಂಬುದಾಗಿ ಕಿಂಗ್ ಎಚ್ಚರಿಕೆ ನೀಡುತ್ತಲೇ ಇದ್ದ. ಈ ಸಂಬಂಧದಲ್ಲಿ 1962ರಲ್ಲಿ ಅಧ್ಯಕ್ಷ ಕೆನೆಡಿಯನ್ನು ಕಂಡು ಎರಡನೆಯ ನೀಗ್ರೋ ವಿಮೋಚನಾ ಘೋಷಣೆಯೊಂದನ್ನು ಹೊರಡಿಸಬೇಕೆಂದು ಅವನನ್ನು ಒತ್ತಾಯಪಡಿಸಿದ. 1954 ರಲ್ಲಿ ಕಾಂಗ್ರೆಸ್ ಹೊಸ ನಾಗರಿಕ ಹಕ್ಕುಗಳ ಕಾಯಿದೆಯೊಂದನ್ನು ಅಂಗೀಕರಿಸಿತು. ಅಲ್ಪ ಸಂಖ್ಯಾತರ ಎಲ್ಲ ಸಮಸ್ಯೆಗಳನ್ನೂ ಇದು ಪರಿಹರಿಸದಿದ್ದರೂ ಕೆಲವನ್ನಾದರೂ ಪರಿಹರಿಸುತ್ತದೆ ಎಂಬುದು ಕಿಂಗನ ಅಭಿಪ್ರಾಯವಾಗಿತ್ತು.

 ಕಿಂಗ್ ತನ್ನ ಹೋರಾಟಗಳಲ್ಲೆಲ್ಲ ಅತ್ಯಂತ ಕಠಿಣವಾದ್ದು ಎಂದು ಕರೆದ ಹೋರಾಟವೊಂದನ್ನು 1962ರ ಏಪ್ರಿಲಿನಲ್ಲಿ ಅಲಬಾಮದ ಬರ್ಮಿಂಗ್‍ಹ್ಯಾಂ ನಗರದಲ್ಲಿ ಪ್ರಾರಂಭಿಸಿದ. ನೀಗ್ರೋಗಳ ಸಂಘಟನೆ ಆಗಲೇ ನಡೆದಿತ್ತು. ಸಹಸ್ರಾರು ವಿದ್ಯಾರ್ಥಿಗಳು ಕೂಡ ಸಂಕಲ್ಪ ಪತ್ರಕ್ಕೆ ತಮ್ಮ ಸಹಿ ಹಾಕಿ ಹೋರಾಟಕ್ಕಾಗಿ ಉತ್ಸುಕರಾಗಿ ಕಾದಿದ್ದರು. ಎಲ್ಲ ವಿಚಾರಗಳಲ್ಲೂ ನೀಗ್ರೋಗಳಿಗೆ ಸಮಾನಾವಕಾಶಸಿಗುವಂತೆ ತಾನು ಚಳವಳಿ ನಡೆಸುತ್ತಿರುವುದಾಗಿ ಕಿಂಗ್ ಘೋಷಿಸಿದ. ಸಣ್ಣ ಪ್ರದರ್ಶನಗಳಿಂದ ಇದು ಮೊದಲಾಯಿತು. ಈ ಪ್ರದರ್ಶನಗಳನ್ನು ಪ್ರಾದೇಶಿಕ ನ್ಯಾಯಾಲಯ ನಿಷೇಧಿಸಿತು. ಮಾರನೆಯ ದಿನವೇ ಕಿಂಗ್ 40 ಅನುಯಾಯಿಗಳೊಡನೆ ಇದನ್ನು ಪ್ರತಿಭಟಿಸಿ ಬಂಧನಕ್ಕೆ ಒಳಗಾದ. ಜಾಮೀನು ಕೊಟ್ಟು ಹೊರಗೆ ಬಂದು ಚಳವಳಿಯನ್ನು ತೀವ್ರಗೊಳಿಸಿದ. ಸಹಸ್ರಾರು ವಿದ್ಯಾರ್ಥಿಗಳು ಹಾಡುತ್ತ ಕೂಗುತ್ತ ನಿಷೇಧಾಜ್ಞೆಗಳನ್ನು ಮುರಿದರು. ಪೋಲೀಸರು ತಮ್ಮ ನಾಯಿಗಳನ್ನೂ ಲಾಠಿಗಳನ್ನೂ ಪ್ರಚಂಡವಾದ ನೀರಿನ ಧಾರೆಯನ್ನು ಎರಚಬಲ್ಲ ನೀರುಕೊಳವೆಗಳನ್ನೂ ಧಾರಳವಾಗಿ ಉಪಯೋಗಿಸಿ ಇವರನ್ನು ಹತ್ತಿಕ್ಕಲು ಯತ್ನಿಸಿದರು. ಪೋಲೀಸ್ ದೌರ್ಜನ್ಯಗಳ ಸುದ್ಧಿ ದೇಶವಿದೇಶಗಳಲ್ಲೆಲ್ಲ ಹಬ್ಬಿತು. ವಿಶೇಷ ವರದಿಗಳೂ ಚಿತ್ರಗಳೂ ಆಡಳಿತದ ವಿರುದ್ಧವಾಗಿ ಜನಾಭಿಪ್ರಾಯವನ್ನು ಸಂಘಟಿಸಿದವು. ಬರ್ಮಿಂಗ್‍ಹ್ಯಾಮಿನ ಭೇದವಾದಿಗಳು ನೀಗ್ರೋಗಳೊಂದಿಗೆ ಒಪ್ಪಂದ ಮಾಡಿಕೊಂಡರು. ಪ್ರತ್ಯೇಕೀಕರಣದ ನಿವಾರಣೆಗಾಗಿ ಯೋಜನೆಯೊಂದನ್ನು ಎರಡು ಪಂಗಡಗಳೂ ಅಂಗೀಕರಿಸಿದವು.

 ಬರ್ಮಿಂಗ್‍ಹ್ಯಾಮಿನಲ್ಲಿ ನಡೆದಂಥ ಘಟನೆಗಳೇ ಅಮೆರಿಕದಲ್ಲೆಲ್ಲ ನಡೆಯಲು ಪ್ರಾರಂಭವಾದವು. 1963ರ ಆಗಸ್ಟ್ 28ರಂದು ವಾಷಿಂಗ್‍ಟನ್ನಿನ ಲಿಂಕನ್ ಸ್ಮಾರಕದ ಮುಂದೆ 2 1/2 ಲಕ್ಷ ಜನರ ಪ್ರಚಂಡ ಪ್ರದರ್ಶನವೊಂದು ನಡೆಯಿತು. ಇದರಲ್ಲಿ 60,000 ಬಿಳಿಯರು ಸೇರಿದ್ದರು. ಈ ಮಹಾ ಜನಸಮುದಾಯವನ್ನುದ್ದೇಶಿಸಿ ಕಿಂಗ್ ಮಾಡಿದ ಭಾಷಣ ಲೋಕಪ್ರಸಿದ್ಧವಾಗಿದೆ.

 ಆದರೆ ಕಿಂಗ್ ಕಂಡ ಕನಸು ನನಸಾಗಲಿಲ್ಲ. ಮತ್ತೊಮ್ಮೆ ಅಮೆರಿಕದ ನಗರಗಳಲ್ಲಿ ಹಿಂಸಾಕಾಂಡ ಮೊದಲಾಯಿತು. ಆದರೂ 1968ರ ಏಪ್ರಿಲ್ 4ರಂದು ಟಿನಿಸೀ ಸಂಸ್ಥಾನದ ಮೆಂಫಿಸ್ನಲ್ಲಿ ಹತ್ಯಾಕಾರಿಯೊಬ್ಬನ ಗುಂಡಿಗೆ ಆಹುತಿಯಾಗಿ ಕಿಂಗ್ ಮಡಿದಾಗ ಅಮೆರಿಕದ ನೀಗ್ರೋಗಳ ಮುಂದೆ ಹೊಸತೊಂದು ಬೆಳಕಿನ ದಾರಿ ತೆರೆದಿತ್ತು. ಹೊಸ ಆಕಾಂಕ್ಷೆಗಳು ಮೆಲ್ಲನೆ ತಲೆದೋರಿದುವು.

ಕಿಂಗ್ ತನ್ನ ಜೀವಮಾನದಲ್ಲಿ ಅನೇಕ ಪ್ರಶಸ್ತಿಗಳನ್ನೂ ಗೌರವಗಳನ್ನೂ ಪಡೆದಿದ್ದ. 1964ರಲ್ಲಿ ಇವನಿಗೆ ನೊಬೆಲ್ ಶಾಂತಿ ಪಾರಿತೋಷಕ ಸಿಕ್ಕಿತ್ತು. ಅಂತರರಾಷ್ಟ್ರೀಯ ಸ್ನೇಹಸಂವರ್ಧನೆಗಾಗಿ ಭಾರತ ಸ್ಥಾಪಿಸಿರುವ ಜವಾಹರಲಾಲ್ ನೆಹರೂ ಪಾರಿತೋಷಕವನ್ನು ಕಿಂಗನಿಗೆ ಆತನ ಮರಣಾತ್ತರ ನೀಡಿ ಗೌರವಿಸಲಾಯಿತು. ಶಾಂತಿ ನಾವು ಅಹಿಂಸೆಯ ದಾರಿಯನ್ನು ಅವಲಂಬಿಸಿದ್ದೇವೆ. ಮಾತುಕತೆಗಳನ್ನು ನಡೆಸಲು, ನ್ಯಾಯವಾದ ನಿರ್ಣಯವೊಂದಕ್ಕೆ ಬರಲು ನಾವು ಯಾವಾಗಲೂ ಸಿದ್ಧ. ಆದರೆ ಅಗತ್ಯ ಬಿದ್ದಾಗ ಕಷ್ಟಗಳನ್ನು ಎದುರಿಸುವುದಕ್ಕೂ ನಮಗೆ ನಿಜವೆಂದು ಕಂಡದ್ದನ್ನು ಎತ್ತಿಹಿಡಿಯುವುದಕ್ಕೂ ಅದಕ್ಕಾಗಿ ನಮ್ಮ ಜೀವನವನ್ನೇ ಪಣವಾಗಿ ಒಡ್ಡುವುದಕ್ಕೂ ಅಷ್ಟೇಮಟ್ಟಿಗೆ ಸಿದ್ಧವಾಗಿದ್ದೇವೆ-ಎಂಬುದು ಕಿಂಗ್ ನೊಬೆಲ್ ಪಾರಿತೋಷಕವನ್ನು ಸ್ವೀಕರಿಸಿದ ಸಂದರ್ಭದಲ್ಲಿ ಹೇಳಿದ ಮಾತು.             

 (ಎಂ.ಎಸ್.ಎಚ್.ಎ.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 